ಅಪರಾಂತ
	
ಪಶ್ಚಿಮಘಟ್ಟಗಳಿಗೂ ಸಮುದ್ರಕ್ಕೂ ಇರುವ ನಡುವಣ ಪ್ರದೇಶ. ಈಗಿನ ಕೊಂಕಣ. ಅಪರಾಂತದ ಉಲ್ಲೇಖ ಮಹಾಭಾರತದಲ್ಲಿ ಬರುತ್ತದೆಯಾದರೂ ಚಾರಿತ್ರಿಕ ದೃಷ್ಟಿಯಿಂದ ಅಶೋಕನ ಕಾಲದ ಉಲ್ಲೇಖವೆ ಮುಖ್ಯವಾದುದು. ಅಪರಾಂತ ಮೊದಲು ಗೌತಮೀಪುತ್ರನ ಆಳ್ವಿಕೆಯಲ್ಲಿತ್ತು. ರುದ್ರದಾಮ ಇದನ್ನು ಆಂಧ್ರದಿಂದ ಗೆದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಆರನೆಯ ಶತಮಾನದಿಂದ ಅಪರಾಂತಕ್ಕೆ ಕೊಂಕಣ ಎಂಬ ಹೆಸರು ಬಂತು. ಬಾದಾಮಿ ಚಾಳುಕ್ಯ ಕೀರ್ತಿವರ್ಮನ ಶಾಸನಗಳಲ್ಲಿ ಕೊಂಕಣವಿಷಯದ ಪ್ರಸ್ತಾಪವಿದೆ. ಈತ ಇಂದ್ರರಾಜನನ್ನು ಕೊಂಕಣಾಧಿಕಾರಿಯಾಗಿ ನಿಯಮಿಸಿದ್ದ. ಅನಂತರ ಕೊಂಕಣ ಎರಡು ಭಾಗಗಳಾಗಿ ಶಿಲಾಹಾರರು ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಹಂಚಿಕೊಂಡು ರಾಜ್ಯವಾಳುತ್ತಿದ್ದರು. ಇವರು ಪೂರ್ಣ ಸ್ವತಂತ್ರರಾಗಿಲ್ಲದಿದ್ದರೂ ರಾಷ್ಟ್ರಕೂಟರ ಅನಂತರ ಕಲ್ಯಾಣಚಾಲುಕ್ಯರ ಮಾಂಡಲಿಕರಾಗಿ ಕೊಂಕಣವನ್ನು ಪಾಲಿಸುತ್ತಿದ್ದರು. ಗೋವದ ಕದಂಬರಾಜ ಜಯಕೇಶಿ ಅನೇಕ ಸಾರಿ ಶಿಲಾಹಾರರ ಮೇಲೆ ಯುದ್ಧಮಾಡಿ ಅವರನ್ನು ಸೋಲಿಸಿದ. 12ನೆಯ ಶತಮಾನದಿಂದ 14ನೆಯ ಶತಮಾನದವರೆಗೆ ಕೊಂಕಣ ಯಾದವರ ಆಳ್ವಿಕೆಗೆ ಸೇರಿತು. ದಕ್ಷಿಣಾಪಥವನ್ನು ಮುಸ್ಲಿಮರು ಆಕ್ರಮಿಸಿಕೊಂಡಮೇಲೆ ಕೊಂಕಣ, ಬಿಜಾಪುರ, ಅಹಮದ್‍ನಗರ ಮುಂತಾದ ರಾಜ್ಯಗಳಲ್ಲಿ ಹರಿದು ಹಂಚಿಹೋಯಿತು. 1572ರಲ್ಲಿ ಕೆಲಭಾಗಗಳು ಮೊಗಲರಿಗೂ ಮಿಕ್ಕ ಭಾಗಗಳು ಪೋರ್ಚುಗಿಸರಿಗೂ ಸೇರಿದುವು. ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಪೋರ್ಚುಗೀಸರಿಗೂ ಮರಾಠೆಯವರಿಗೂ ಅನೇಕ ಕದನಗಳು ನಡೆದರೂ ಪೋರ್ಚುಗೀಸರೇ ಕೊಂಕಣದಲ್ಲಿ ಬಲಶಾಲಿಗಳಾಗಿದ್ದರು. ಸುಮಾರು 1818ರ ಹೊತ್ತಿಗೆ ಕೆಲವು ಭಾಗಗಳು ಬ್ರಿಟಿಷರ ಆಳ್ವಿಕೆಗೆ ಸೇರಿದುವು. ಭಾರತದ ಸ್ವಾತಂತ್ರ್ಯಾನಂತರ, ಕೆಲವು ಭಾಗಗಳು ಗೋವ, ಮಹಾರಾಷ್ಟ್ರ ಮತ್ತು ಕರ್ಣಾಟಕ ರಾಜ್ಯಗಳಿಗೆ ಸೇರಿವೆ.						 
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ